ಬಾಜಟ್, ವಾಲ್ಟರ್ 1826-77. ಇಂಗ್ಲೆಂಡಿನ ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ, ಸಮಾಜಶಾಸ್ತ್ರಜ್ಞ, ಸಾಹಿತಿ ಹಾಗೂ ಪತ್ರಿಕೋದ್ಯಮಿ. ವ್ಯಾಪಾರ ವ್ಯವಹಾರಗಳ ಆಂತರಿಕ ಪ್ರವೃತ್ತಿಯ ಸೂಕ್ಷ್ಮಾನುಭವದಿಂದ ಆರ್ಥಿಕ ಮತ್ತು ಹಣಕಾಸಿನ ವಿಚಾರಗಳನ್ನು ಕುರಿತು ಅನೇಕ ಪ್ರಬಂಧಗಳನ್ನು ಪ್ರಕಟಿಸಿದ. ಲಾರ್ಡ್ ಬ್ರೈಸ್‍ನ ಪ್ರಕಾರ ಈತ ಆ ತಲೆಮಾರಿನ ಹುಟ್ಟು ಮೇಧಾವಿ.

ಸಾಮರ್‍ಸೆಟ್ ಷೈರಿನ ಲಾಂಗ್ ಪೋರ್ಟ್ ಎಂಬಲ್ಲಿ 1826 ಫೆಬ್ರವರಿ 3 ರಂದು ಜನನ. ತಾಮಸ್ ವ್ಯಾಟ್ಸನ್ ಬಾಜಟ್ ಇವನ ತಂದೆ, ಬ್ಯಾಂಕ್ ಒಂದರಲ್ಲಿ ವೃತ್ತಿನಿರತ ಹಾಗೂ ಹಡಗಿನ ಮಾಲೀಕ. ಎಡಿತ್ ಸ್ಟಕಿ ತಾಯಿ. ಬಾಜಟ್ 1846ರಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ. ಪದವಿ ಗಳಿಸಿದ. ಮುಂದೆ ಎಂ.ಎ. ಪದವಿಯ ಜೊತೆಗೆ ತತ್ವಶಾಸ್ತ್ರದಲ್ಲಿ ತೋರಿದ್ದ ಪ್ರವೀಣತೆಗಾಗಿ ವಿಶ್ವವಿದ್ಯಾಲಯದ ಸ್ವರ್ಣಪದಕ ಗಳಿಸಿದ (1848). ಅನಂತರ ನ್ಯಾಯಶಾಸ್ತ್ರ ಅಭ್ಯಾಸ ಮಾಡಿದ. ಬಾರ್ ಕೌನ್ಸಿಲಿನ ಕರೆಬಂದರೂ ಈತ ವಕೀಲಿ ವೃತ್ತಿ ಕೈಗೊಳ್ಳಲಿಲ್ಲ. ಬದಲಾಗಿ ಬ್ಯಾಂಕಿಂಗ್ ವೃತ್ತಿ ಕೈಗೊಂಡು 1858ರ ತನಕ ದೇಶೀಯ ಬ್ಯಾಂಕರನಾಗಿ ಸೇವೆ ಸಲ್ಲಿಸಿದ. ಈ ಮಧ್ಯೆ ಲಂಡನ್ನಿನಿಂದ ಪ್ರಕಟವಾಗುತ್ತಿದ್ದ ಇನ್‍ಕ್ವಯರರ್ ಎಂಬ ವಾರಪತ್ರಿಕೆಯಲ್ಲಿ ಕ್ಷಿಪ್ರಕ್ರಾಂತಿ ಕುರಿತು ನೆಪೋಲಿಯನ್ನನ ಪರವಾಗಿ ಕೆಲವು ಲೇಖನ ಬರೆದು ವಾದವಿವಾದಕ್ಕೆ ಕಾರಣನಾದ. ಕೆಲಕಾಲದ ಬಳಿಕ ತನ್ನ ಆಪ್ತನೊಬ್ಬ ನಡೆಸುತ್ತಿದ್ದ ಸ್ಪೆಕ್ಟೇಟರ್ ಎಂಬ ನಿಯತಕಾಲಿಕದಲ್ಲಿ ಮಿಲ್ಟನ್ ಷೇಕ್‍ಸ್ಪಿಯರ್, ಗಿಬ್ಬನ್, ವಾಲ್ಟರ್ ಸ್ಕಾಟ್ ಮೊದಲಾದ ಪ್ರಸಿದ್ಧ ಸಾಹಿತಿಗಳನ್ನು ಕುರಿತಂತೆ ಶ್ರೇಷ್ಠ ಮಟ್ಟದ ಸಾಹಿತ್ಯಕ ಪ್ರಬಂಧಗಳನ್ನು ಪ್ರಕಟಿಸಿದ.

ಬಾಜಟ್ ಲಂಡನ್ನಿನ ಹೆಸರಾಂತ ವಾರ ಪತ್ರಿಕೆ ಎಕಾನಮಿಸ್ಟ್‍ನ ಸಂಸ್ಥಾಪಕ ಸಂಪಾದಕನಾಗಿದ್ದ. ಜೇಮ್ಸ್ ವಿಲ್ಸನ್ನನ ಹಿರಿಯ ಮಗಳೊಂದಿಗೆ ವಿವಾಹವಾದ (1858). ಜೇಮ್ಸ್ ವಿಲ್ಸನ್ ಭಾರತದ ಹಣಕಾಸು ಸುಧಾರಣೆಯ ನಿಯೋಗಿಯಾಗಿ ನೇಮಕಗೊಂಡು ಭಾರತಕ್ಕೆ ಬಂದಾಗ (1859) ಬಾಜಟ್ ಎಕಾನಮಿಸ್ಟ್ ಪತ್ರಿಕೆಯ ಸಂಪಾದಕನಾಗಿ ನೇಮಕಗೊಂಡ. ಮುಂದೆ ಜೇಮ್ಸ್ ವಿಲ್ಸನ್ನನ ಸಾವಿನಿಂದ ಇಂಡಿಯನ್ ವೈಸ್‍ರಾಯ್ ಕಾನ್ಸೆಲ್ಲಿನ ತೆರವಾದ ಸ್ಥಾನಕ್ಕೆ ಇವನನ್ನು ಆಹ್ವಾನಿಸಲಾಯಿತು (1861). ಇವನು ಅದನ್ನು ಒಪ್ಪಿಕೊಳ್ಳದೆ ಎಕನಾಮಿಸ್ಟ್ ಪತ್ರಿಕೆಯ ಸಂಪಾದಕನಾಗಿಯೇ ಮುಂದುವರಿದು ತನ್ನ ಕೊನೆಗಾಲದ ತನಕವೂ (1877) ಅದನ್ನೆ ಮುಖ್ಯ ಉದ್ಯೋಗವಾಗಿ ಮಾಡಿಕೊಂಡಿದ್ದ. ಇವನ ಸಂಪಾದಕತ್ವದಲ್ಲಿ ಎಕಾನಮಿಸ್ಟ್ ಪತ್ರಿಕೆ ಆರ್ಥಿಕ ಮಾಹಿತಿಗಳ ಒಂದು ಆಕರವಾಗಿ, ವಿಮರ್ಶೆಯ ಕೇಂದ್ರವಾಗಿ ವೃದ್ಧಿಹೊಂದಿತು. ಇಡೀ ಯೂರೋಪಿನಲ್ಲಿಯೇ ವಾರಪತ್ರಿಕೆಯಾಗಿ ಎಕಾನಮಿಸ್ಟ್ ಪ್ರಸಿದ್ಧವಾಯಿತು.

ಇವನಿಗೆ ಲಿಬರಲ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಬೇಕೆಂಬ ಉತ್ಕಟ ಹಂಬಲವಿತ್ತು. ಇದಕ್ಕಾಗಿ ನಾಲ್ಕು ಬಾರಿ ಪ್ರಯತ್ನಿಸಿ ವಿಫಲನಾದ. ಇವನು ಸಾರ್ವಜನಿಕರ ಮನ ಒಲಿಸುವಂಥ ವಾಗ್ಮಿಯಾಗಿರಲಿಲ್ಲ. ಹಣ ಸುರಿದು ಮತ ಗಿಟ್ಟಿಸಲು ಇವನಿಗೆ ಇಷ್ಟವಿರಲಿಲ್ಲ. ಚುನಾವಣೆಯಲ್ಲಿ ಉಂಟಾದ ಸೋಲಿನಿಂದ ಮನಸ್ಸು ಕಹಿಮಾಡಿಕೊಳ್ಳುವ ಬದಲು ರಾಜಕೀಯ ವಿಧಾನದ ಬಗ್ಗೆ ಆಳವಾದ ಮತ್ತು ವಸ್ತುನಿಷ್ಠವಾದ ತಿಳುವಳಿಗೆ ರೂಢಿಸಿಕೊಂಡ. ಗ್ಲ್ಯಾಡ್‍ಸ್ಟನ್, ಲಾರ್ಡ್ ಕಾರ್ನರ್‍ವಾನ್, ಎಡ್ವರ್ಡ್ ಫ್ರಾಸ್ಟರ್ ಮೊದಲಾದ ಲಿಬರಲ್ ಹಾಗೂ ಕನ್ಸರ್ವೇಟಿವ್ ಪಕ್ಷದ ಮುಖಂಡರುಗಳ ಗೆಳೆತನ ಇವನಿಗೆ ಪಾರ್ಲಿಮೆಂಟಿನಲ್ಲಿ ಗೌರವಯುತ ಸ್ಥಾನ ದೊರಕಿಸಿಕೊಟ್ಟಿತು. ಸರ್ಕಾರದ ನೀತಿ ನಿಯಮಗಳ ರಚನೆ ಮತ್ತು ಅನುಷ್ಠಾನದ ವಿಚಾರದಲ್ಲಿ ಪ್ರಾಯಶಃ ಒಬ್ಬ ಚುನಾಯಿತ ಪಾರ್ಲಿಮೆಂಟ್ ಸದಸ್ಯ ಅಥವಾ ಮಂತ್ರಿಯಾಗಿ ಇರುತ್ತಿದ್ದುದಕ್ಕಿಂತಲೂ ಹೆಚ್ಚು ಪ್ರಭಾವಶಾಲಿಯಾಗಿದ್ದ. ಆರ್ಥಿಕ ಮತ್ತು ಹಣಕಾಸಿನ ವಿಚಾರಗಳ ಬಗ್ಗೆ ಆಗಿಂದಾಗ್ಗೆ ಇವನ ಸಲಹೆ ಪಡೆಯಲಾಗುತ್ತಿತ್ತು.

ತಾನೇ ಹೇಳಿಕೊಂಡಿರುವಂತೆ ಬಾಜಟ್ ಒಬ್ಬ ಕನ್ಸರ್ವೇಟಿವ್ ಲಿಬರಲ್. ಬಹುತೇಕ ಲಿಬರಲ್ ಮುಖಂಡರುಗಳಿಂದ ಭಿನ್ನನಾಗಿ ಇವನು ಗ್ರಾಮೀಣ ಹಿನ್ನೆಲೆಯಲ್ಲಿ ಬೆಳೆದು ಬಂದ. ಆದಕಾರಣ ಇವನಿಗೆ ತ್ವರಿತ ಕೈಗಾರೀಕರಣ ಮತ್ತು ನಗರೀಕರಣದಿಂದ ಉದ್ಭವಿಸುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಕಳಕಳಿ. ಪ್ರಪಂಚ ವಿದ್ಯಮಾನಗಳ ಸಮೀಕ್ಷಕನಾಗಿ ಇವನಿಗೆ ಫ್ರಾನ್ಸಿನ ಬಗ್ಗೆ ಅಪಾರ ಒಲವು. ಬಿಸ್ಮಾರ್ಕ್‍ನ ನಾಯಕತ್ವದಲ್ಲಿ ಸಾಗಿದ್ದ ಜರ್ಮನಿಯ ಬಗ್ಗೆ ಅಷ್ಟೇ ಅಸಮಾಧಾನ. ಅಮೆರಿಕದ ವಿಚಾರದಲ್ಲಿ ತನ್ನ ದೇಶೀಯ ಸಮಕಾಲೀನರುಗಳಂತೆಯೇ ಇವನು ಒಕ್ಕೂಟವಾದಿಯಾಗಿದ್ದನಾದರೂ ತನ್ನ ವಿಚಾರವಂತಿಕೆಯಿಂದಾಗಿ ಏಬ್ರಹಾಮ್ ಲಿಂಕನ್ನನ ಬೆಂಬಲಿಗನಾಗಿದ್ದ. ಅಮೆರಿಕದ ಅಂತರ್ಯುದ್ಧವನ್ನು ಕುರಿತು ಸುಮಾರು 20 ಲೇಖನಗಳನ್ನು ಬರೆದು ಪ್ರಕಟಿಸಿದ.

ರಾಜಕೀಯ ವಿಶ್ಲೇಷಕನಾಗಿ ಬಾಜಟ್ ರಚಿಸಿದ ಎರಡು ಗ್ರಂಥಗಳಲ್ಲಿ ಒಂದು ಇಂಗ್ಲಿಷ್ ಕಾನ್‍ಸ್ಟಿಟ್ಯೂಷನ್. ಬ್ರಿಟಿಷ್ ಸಂವಿಧಾನ ಪದ್ಧತಿಯನ್ನು ಒಳಹೊಕ್ಕು ನೋಡುವ ಒಂದು ಪ್ರಯತ್ನ, ಎರಡನೆಯ ಗ್ರಂಥ ಫಿಸಿಕ್ಸ್ ಅಂಡ್ ಪೊಲಿಟಿಕ್ಸ್, ಇದರಲ್ಲಿ ರಾಷ್ಟ್ರಗಳ ಬೆಳವಣಿಗೆಗೆ ವಿಕಾಸವಾದದ ಪರಿಭಾವನೆಯನ್ನು ಅನ್ವಯಿಸುವ ಸಾಧ್ಯಾಸಾಧ್ಯತೆಗಳನ್ನು ಕುರಿತು ವಿಶ್ಲೇಷಿಸಲಾಗಿದೆ. ರಾಷ್ಟ್ರಗಳ ಬೆಳವಣಿಗೆ ಅಪ್ರಜ್ಞಾತ್ಮಕ ಅನುಕರಣೆಯ ಒಂದು ಪರಂಪರೆ-ಸಂಪ್ರದಾಯ ಸಮುಚ್ಚಯ ಎಂಬುದು ಇವನ ಅಭಿಪ್ರಾಯ. ಈ ಅಭಿಪ್ರಾಯ ವಿಲಿಯಮ್ ಜೇಮ್ಸ್ ಗ್ರಹ್ಯಾಮ್ ವ್ಯಾಲಸ್ ಮೊದಲಾದ ಸಮಾಜಶಾಸ್ತ್ರಜ್ಞರ ಮೇಲೆ ಪ್ರಭಾವ ಬೀರಿದೆ ಎನ್ನುವುದುಂಟು.

ಅರ್ಥಶಾಸ್ತ್ರಜ್ಞನಾಗಿ ಐತಿಹಾಸಿಕ ಪಂಥಕ್ಕೆ ಸೇರಿದ ಈತನಿಗೆ ಆರ್ಥಿಕ ಸಂಘ ಸಂಸ್ಥೆಗಳ ಐತಿಹ್ಯ ವರ್ತಮಾನಕಾಲದ ಆರ್ಥಿಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಹೆಚ್ಚಿನ ಆಸಕ್ತಿ. ಈ ಬಗ್ಗೆ ಇವನು ನೀಡುತ್ತಿದ್ದ ಸಲಹೆ ಸೂಚನೆಗಳಿಗೆ ಮಾನ್ಯತೆ ಇರುತ್ತಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಸಾಲ ಪಡೆಯುವ ಒಂದು ಸಾಧನವಾದ ಖಜಾನೆ ಹುಂಡಿಯನ್ನು ಆವಿಷ್ಕರಿಸಿದ ಕೀರ್ತಿ ಇವನಿಗೆ ಸಲ್ಲಬೇಕಾದದ್ದು ಇವನೊಬ್ಬ ಪ್ರಬಲ ಮುಕ್ತ ವ್ಯಾಪಾರ ತತ್ವಪ್ರತಿಪಾದಕ. ಆದರೆ ನಿಲಿಪ್ತ ಆರ್ಥಿಕ ನೀತಿಯಲ್ಲಿ ಇವನಿಗೆ ವಿಶ್ವಾಸವಿರಲಿಲ್ಲ, ಆರ್ಥಿಕ ವಿಚಾರಗಳನ್ನು ಕುರಿತಾದ ತನ್ನ ಮೊತ್ತಮೊದ¯ನೆಯ ಲೇಖನದಲ್ಲಿ (1848) ನಿರ್ಲಿಪ್ತ ನೀತಿಯ ದಿಕ್ಕುದಿಸೆಗಳನ್ನು ನಿರ್ಣಯಿಸಲೆತ್ನಿಸಿ, ನಿರ್ಲಿಪ್ತ ನೀತಿಯ ಸೂತ್ರಗಳನ್ನು ಹಣಕ್ಕೆ ಅನ್ವಯಿಸುವ ಕ್ರಮವನ್ನು ತೀವ್ರವಾಗಿ ಖಂಡಿಸಿದ. ಹಣ ಸೃಷ್ಟಿ ಸರ್ಕಾರದ ಸ್ವಾಮ್ಯವಾಗಿರಬೇಕು ಮತ್ತು ಹಣಕಾಸಿನ ವ್ಯವಸ್ಥೆಯನ್ನು ಹತೋಟಿಯಲ್ಲಿಡಬೇಕು ಎಂಬ ಅಂಶಗಳನ್ನು ಒತ್ತಿಹೇಳಿದ. ಇವು ಮುಂದೆ ಇವನ ಲೊಂಬಾರ್ಡ್ ಸ್ಟ್ರೀಟ್ ಎಂಬ ಹೆಸರಾಂತ ಗ್ರಂಥದಲ್ಲಿ ನಿರೂಪಿತವಾಗಿರುವ ಕೇಂದ್ರ ಬ್ಯಾಂಕಿನ ಸಿದ್ಧಾಂತಕ್ಕೆ ಹಿನ್ನೆಲೆಯಾದುವು. ಈ ಗ್ರಂಥ ಪ್ರಕಟವಾಗುವ ತನಕ ಕೇಂದ್ರ ಬ್ಯಾಂಕಿನ ಸಾಲದ ನಿಯಂತ್ರಣ ತತ್ತ್ವಗಳು ಪ್ರತಿಪಾದಿತವಾಗಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಅರ್ಥಶಾಸ್ತ್ರಜ್ಞ ಡೇವಿಡ್ ರಿಕಾರ್ಡೋನ ವಿಚಾರಗಳಿಂದ ಬಾಜಟ್ ಪ್ರೇರಣೆ ಪಡೆದನಾದರೂ ಈತ ಅವನ ಅನುಯಾಯಿಯಲ್ಲ. ಐತಿಹಾಸಿಕ ಪಂಥದ ಸದಸ್ಯನಾಗಿ ಅಭಿಜಾತ ಅರ್ಥಶಾಸ್ತ್ರಜ್ಞರ ಭಾವನಾಪ್ರಧಾನ ವಿಶ್ಲೇಷಣೆಯ ವಿಧಾನವನ್ನು ಅಲ್ಲಗಳೆದ. ಈತ ಅಭಿಪ್ರಾಯ ಪಟ್ಟಿರುವಂತೆ ಆರ್ಥಿಕ ಚಟುವಟಿಕೆಗಳು ವ್ಯಕ್ತಿಯ ಸಾಮಾಜಿಕ ಜೀವನದ ಅವಿಭಾಜ್ಯ ಅಂಗ. ಕಾಲಾನುಕ್ರಮದಲ್ಲಿ ಅವುಗಳ ರಚನೆ ಹಾಗೂ ದೃಷ್ಟಿ ಬದಲಾಗುತ್ತ ಹೋಗುತ್ತವೆ. ಆದ್ದರಿಂದ ಸಾರ್ವಕಾಲಿಕ ಹಾಗೂ ಸರ್ವಮಾನ್ಯ ಮತ್ತು ಸರ್ವಸಮಾಜಗಳಿಗೂ ಅನ್ವಯವಾಗುವ ಆರ್ಥಿಕ ತತ್ತ್ವಗಳನ್ನು ರೂಪಿಸುವುದು ಅಸಾಧ್ಯ. ಕಾಲಾನುಕ್ರಮದಲ್ಲಿ ಉಂಟಾಗುವ ಐತಿಹಾಸಿಕ ಬದಲಾವಣೆಗಳಿಗೆ ಅನುಗುಣವಾಗಿ ಹೊಸ ತತ್ತ್ವಗಳ ಸೃಷ್ಟಿ ಅನಿವಾರ್ಯ. ಆರ್ಥಿಕ ವಿಶ್ಲೇಷಣೆಯಲ್ಲಿ ಅನುಭವಾತ್ಮಕವಾದ ಮತ್ತು ಪ್ರಯೋಗ ಪ್ರಧಾನವಾದ ಐತಿಹಾಸಿಕ ವಿಧಾನದ ಮಹತ್ತ್ವವನ್ನು ಇವನು ಎತ್ತಿ ಹಿಡಿದ.

ಹಣ, ಬ್ಯಾಂಕಿಂಗ್ ವ್ಯವಸ್ಥೆ; ಅಂತರರಾಷ್ಟ್ರೀಯ ವ್ಯಾಪಾರ ಸಂಘಟನಾಕಾರನ ಕರ್ತವ್ಯಗಳು, ಉತ್ಪಾದನಾ ವೆಚ್ಚಗಳ ಆರ್ಥಿಕ ಆವರ್ತಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದ ತತ್ವಗಳ ಲೇಖನಗಳನ್ನು ಪ್ರಕಟಿಸಿ ಬಾಜಟ್ ಅರ್ಥಶಾಸ್ತ್ರಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾನೆ.

ಈತನ ಆರ್ಥಿಕ ಚಿಂತನೆಗಳಲ್ಲಿ ಮುಖ್ಯವಾಗಿ ಮೂರು ಕೇಂದ್ರ ಭಾವನೆಗಳನ್ನು ಗುರುತಿಸಬಹುದು -(1) ಹಣಕಾಸಿನ ಮತ್ತು ಹಣಕಾಸಿಗೆ ಸಂಬಂಧಪಡದ ಆರ್ಥಿಕ ವ್ಯವಸ್ಥೆಗಳ ನಡುವಣ ಮೂಲಭೂತ ವ್ಯತ್ಯಾಸಗಳು, (2) ಸರ್ವ ಆರ್ಥಿಕ ಕಾರ್ಯಗತಿಗಳ ಆಂತರಿಕ ಸಂಬಂಧ (3) ಆರ್ಥಿಕ ವರ್ತನೆಯ ವಿಶ್ಲೇಷಣೆಯಲ್ಲಿ ಮಾನಸಿಕ ಮತ್ತು ಸಾಮಾಜಿಕ ಅಂಶಗಳ ಮಹತ್ತ್ವ ಇಂಥ ಸೂಕ್ಷ್ಮ ಭಾವನೆಗಳನ್ನು ಸಾಧನವಾಗಿ ಬಳಸಿಕೊಂಡು ಸಂಕೀರ್ಣವಾದ ಆರ್ಥಿಕ ವಿಷಯಗಳನ್ನು ವಿಶ್ಲೇಷಿಸಲೆತ್ನಿಸಿರುವುದು ಇವನ ಜಾಣ್ಮೆಯ ಕುರುಹು. ರಸೆಲ್ ಬ್ಯಾರಿಂಗ್‍ಟನ್ ಎಂಬವರು ಈತನ ಜೀವನ ಮತ್ತು ಕಾರ್ಯ ಕುರಿತು ದಿ ವಕ್ರ್ಸ್ ಅಂಡ್ ಲೈಫ್ ವಾಲ್ಟರ್ ಬಾಜಟ್ ಎಂಬ ಹತ್ತು ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಬಾಜಟೇ ಲಾಂಗ್‍ಪೋರ್ಟ್‍ನಲ್ಲಿ 1877ರ ಮಾರ್ಚ್ 24ರಂದು ತೀರಿಕೊಂಡ. 						
(ಕೆ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ